1899-1936. ಪ್ರಸಿದ್ಧ ಸ್ಪ್ಯಾನಿಷ್ ಕವಿ ಹಾಗೂ ನಾಟಕಕಾರ. ಸ್ಪೇನಿನ ಗ್ರೆನಡ ಬಳಿ ಜನಿಸಿದ. ಸ್ಪ್ಯಾನಿಷ್ ಸಾಹಿತ್ಯದ ಆದಿಯ ಸೀದ್‍ಕಾವ್ಯ, ರೊಮಾನ್ ಲಾವಣಿಗಳು, ಮತ್ತು 17ನೆಯ ಶತಮಾನದ ಬರೋಕ್ ಕಾವ್ಯಗಳಿಂದ ಪ್ರಭಾವಿತನಾಗಿ ಕಾವ್ಯ ರಚನೆಗೆ ತೊಡಗಿದ. ಇವನ ಆರಂಭದ ಕವಿತೆಗಳಲ್ಲಿ ಸರಳವಾದರೂ ಅತ್ಯಂತ ಸೂಕ್ಷ್ಮವಾದ ಪ್ರಕೃತಿಯ ಸುಂದರ ವರ್ಣನೆ ಕಂಡುಬರುತ್ತದೆ. ಲಿಬ್ರೊಡೆ ಪೊಯಿಮಸ್(1921) ಮತ್ತು ಕಾನ್ಸಿಯಾನ್ಸ್(1927)-ಇವು ಇವನ ಆರಂಭದ ಕವಿತಾ ಸಂಗ್ರಹಗಳು. ಜಿಪ್ಸಿ ಬ್ಯಾಲೆಡ್ಸ್ (ರೊಮಾನ್ಸೇರೊ ಗ್ರೀಟಾನೊ, 1928) ಇವನ ಅತ್ಯಂತ ಪ್ರಸಿದ್ಧ ಕವನ ಸಂಕಲನ. ಇದರಲ್ಲಿ ಜಿಪ್ಸಿ ಜನರ ಜೀವನ ನಿರೂಪಿತವಾಗಿದೆ. ಆದಿವಾಸಿ ಜೀವನಕ್ರಮದ ಬಗ್ಗೆ ಕವಿಗೆ ಆದರಪೂರ್ವಕ ಸಹಾನುಭೂತಿ, ಅವರ ವ್ಯಕ್ತಿತ್ವದ ಬಗ್ಗೆ ಪ್ರೀತಿ, ಗೌರವಗಳು ವ್ಯಕ್ತವಾಗಿವೆ. ಇವನ ಮಿತ್ರನಾದ ಇಗ್ನಾಸಿಯೊ ಸಾಂಕೇತ್ ಮೇಗೀಯಸ್ ಎಂಬ ಗೂಳಿಕಾಳಗ ಪಟುವೊಬ್ಬ 1934ರಲ್ಲಿ ಗೂಳಿ ಇರಿತಕ್ಕೀಡಾಗಿ ದುರ್ಮರಣ ಹೊಂದಿದ. ಅವನ ಸಾವು ಕವಿಯ ಮನಸ್ಸಿನ ಮೇಲೆ ನೋವಿನ ಬರೆ ಎಳೆಯಿತು. ಅವನ ನೆನಪಿಗಾಗಿ ಈತ ಶೋಕಗೀತೆಯೊಂದನ್ನು ರಚಿಸಿದ. ಲ್ಯಾಮೆಂಟ್ ಫಾರ್ ಇಗ್ನಾಸಿಯೊ ಸಾಂಕೇತ್ ಮೇಗೀಯಸ್ ಎಂಬ ಶೋಕಗೀತೆ ಈತನ ಅತ್ಯುತ್ತಮ ಕವಿತೆಗಳಲ್ಲಿ ಒಂದೆಂದು ಹೆಸರಾಗಿದೆ.    	
ಈತ ಬ್ಲಡ್ ವೆಡ್ಡಿಂಗ್(1933), ಯರ್ಮಾ(1934), ದಿ ಹೌಸ್ ಆಫ್ ಬರ್ನಾರ್ಡ್ ಆಲ್ಬ(1936) ಎಂಬ ಮೂರು ದುರಂತ ನಾಟಕಗಳನ್ನು ರಚಿಸಿದ್ದು ಇವು ಅತ್ಯುತ್ತಮ ಕೃತಿಗಳೆಂದು ಪ್ರಸಿದ್ಧವಾಗಿವೆ. ಕೆಲವು ಹಾಸ್ಯ ನಾಟಕಗಳನ್ನೂ ಈತ ಬರೆದಿದ್ದಾನೆ. 1932ರಲ್ಲಿ ಈತ ಸಂಚಾರಿ ರಂಗಭೂಮಿಯನ್ನು ಸ್ಥಾಪಿಸಿದ. ಇದು ಸ್ಪೇನಿನಾದ್ಯಂತ ಸಂಚರಿಸಿ, ನಾಟಕಗಳನ್ನು ಪ್ರದರ್ಶಿಸಿ ನಾಟಕ ಚಳವಳಿಯನ್ನು ಹುಟ್ಟುಹಾಕಿತು. ಸ್ಪ್ಯಾನಿಷ್ ಅಂತರ್ಯುದ್ಧದ ಸಂದರ್ಭದಲ್ಲಿ ಫ್ರಾನ್ಸಿಸ್‍ಕೊ ಫ್ರಾಂಕೋನ ಅನುಯಾಯಿಗಳಿಂದ ಲೋರ್ಕ ಸಾವಿಗೀಡಾದ. ಕೆ.ಎನ್.ವಿಜಯಲಕ್ಷ್ಮಿ ಎಂಬವರು ಇವನ ಮೂರು ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ